.comment-link {margin-left:.6em;}

BLOG - ER Ramachandran

Thursday, April 04, 2013

'ಸಕಾಲ'ಕ್ಕೆ ಸಖತ್ ತಯಾರಿ!

                  ತಿಳಿ ಹಾಸ್ಯ :     'ಸಕಾಲ'ಕ್ಕೆ ಸಖತ್ ತಯಾರಿ!
 
  * ಇ. ಆರ್. ರಾಮಚಂದ್ರನ್, ಮೈಸೂರು Published: Thursday, April 5, 2012 
 
ಕರ್ನಾಟಕ ಸರ್ಕಾರ ಏಪ್ರಿಲ್ ಮೊದಲನೇ ತಾರೀಖಿನಿಂದ 'ಸಕಾಲ' ವನ್ನು ಜಾರಿಗೆ ತಂದಿದೆ. ಅಂದ್ರೆ ಎಲ್ಲರೂ ಎಲ್ಲಾ ಕೆಲಸವನ್ನು ಸಕಾಲಕ್ಕೆ ಮಾಡಬೇಕು ಎಂದು ಇದರ ಉದ್ದೇಶ. ಇದು ಎಲ್ಲಾ ಸರ್ಕಾರಿ ಆಫೀಸುಗಳು, ಶಾಲಾ ಕಾಲೇಜುಗಳು, ಆಸ್ಪತ್ರೆಯಲ್ಲಿ ಕೆಲಸ ಮಾಡುವ ಸರ್ಕಾರಿ ನೌಕರರಿಗೆ ಅನ್ವಯಿಸುತ್ತೆ. ಇದು ಮುಖ್ಯಮಂತ್ರಿ ಸದಾನಂದರ ಇನಿಷಿಯೇಟಿವ್. ಇದನ್ನು ಆಚರಿಸಿಕೊಂಡು ಬಂದರೆ ಜೀವನ ಖುಷಿಯಾಗಿ ಮತ್ತು ಸದಾ ಆನಂದಾಯಕವಾಗಿ ಇರುತ್ತೆ ಅನ್ನುವ ದೃಢ ನಂಬಿಕೆ ಅವರದು.
 ನಮ್ಮ ಅಜ್ಜಿಯ ಗ್ರೂಪಿನವರ ಎಕ್ಸ್ ಪಿರಿಯನ್ಸ್ ಏನು? ನೋಡೋಣ... ಬನ್ನಿ......
 
ನಮ್ಮ ಅಜ್ಜಿ ಅವರ 'ಪಟಾಲಮ್ ಎಕ್ಸ್ ಪ್ರೆಸ್' ಮಾಮೂಲಿನಂತೆ ಹರಿಕಥೆ ಕೇಳೋದಕ್ಕೆ ಹೊರಟ್ರು. ಆ ದಿನ ಅಚ್ಯುತದಾಸರು ಕರ್ಣನ ಅಪಾರವಾದ ದಾನ ಮಾಡುವ ವ್ಯಕ್ತಿತ್ವವನ್ನು ವಿವರಿಸುತ್ತಿದ್ದರು. ಅಜ್ಜಿ ಗ್ರೂಪ್ ಕೊನೆಯಲ್ಲಿ ಕೂತಿತ್ತು. 'ಬ್ರಾಹ್ಮಣನ ವೇಷದಲ್ಲಿ ಬಂದ ಇಂದ್ರನಿಗೆ ಕವಚ ಮತ್ತು ಕರ್ಣಕುಂಡಲವನ್ನೇ ಕಿತ್ತು ಕೊಟ್ಟ ಕರ್ಣ, ನಿಜವಾಗಿಯೂ ದಾನ ಶೂರ ಕರ್ಣ.. ದೇಹದ ಒಂದು ಭಾಗವನ್ನೇ ದಾನ ಮಾಡಿದ'.
 ಗವರ್ನಮಂಟ್ ಹಾಸ್ಪೆಟಲ್ ನಲ್ಲಿ ಕೆಲಸ ಮಾಡುವ ಸೀನಿಯರ್ ನರ್ಸ್ ಗಾಯಿತ್ರಿ ಪಿಸುಗುಟ್ಟಲು ಶುರುಮಾಡಿದರು. ಇನ್ನೆರೆಡು ವರ್ಷಕ್ಕೆ ಅವರು ರಿಟೈರಾಗ್ತಾರೆ. 'ನಮ್ಮ ಹಾಸ್ಪೆಟಲ್ಗೆ ಸಿಎಂ ಆಫೀಸಿನಿಂದ ಸರ್ಕುಲರ್ ಬಂದಿದೆ. ಎಲ್ಲಾ ಸಕಾಲಕ್ಕೆ ಮಾಡ್ಬೇಕೂ..ಇಲ್ದಿದ್ರೆ ಪ್ರಮೋಷನ್ ಗೋತಾ ಅಂತೆ. ನಮ್ಮ ನೆಫ್ರಾಲಜಿ ಡಿಪಾರ್ಟಮೆಂಟ್ನಲ್ಲಿರೋ ಸ್ವಲ್ಪ ಡಾಕ್ಟರುಗಳು ಬಡವ್ರ ಪೇಷಂಟ್ಗಳಿಂದ ಎನೋ ಸುಳ್ಳು ಕಾಹಿಲೆ ಹೇಳಿ ಕಿಡ್ನಿ ಆಪರೇಷನ್ಮಾಡಿ, ಅರಬ್ಬರಿಗೆ, ಸಿಂಗಪುರ್ ನ ಭಾರೀ ಕುಳ ಪೇಷಂಟ್ ಗಳಿಗೆ ಹತ್ತು ಹದಿನೈದು ಲಕ್ಷಕ್ಕೆ ಮಾರ್‍ತಾ ಇದಾರೆ. ಕಿಡ್ನಿಗೆ ಬಹಳ ಡಿಮ್ಯಾಂಡ್, ವೈಟಿಂಗ್ ಲಿಸ್ಟ್ ಬಾಲದ ಹಾಗೆ ಬೆಳದಿದೆ. ಎಲ್ಲಾ ಸಕಾಲಕ್ಕೆ ಆಗ್ಬೇಕೂಂತ, ಸಿಎಂ ಪ್ರೆಷರ್ ಹಾಕಿರೋದ್ರಿಂದ ಇನ್ನಷ್ಟು ಸೇಲ್ಸ್ ಮನ್ ಗಳನ್ನು ಹಾಕಿ, ಹಳ್ಳಿಹಳ್ಳಿಯಿಂದಲೂ ಪೇಷಂಟ್‌ಗಳನ್ನು ಹೊಡಕೊಂಡ್ಬಂದು ಅವರಿಗೆಲ್ಲಾ ತಲಾ 2000 ರು. ಕ್ಯಾಷ್, ಜೊತೆಗೆ ಸ್ಯಾಮ್ಸಂಗ್ ಗ್ಯಾಲಾಕ್ಸಿ ಮೊಬೈಲ್, ಮತ್ತು ದರ್ಶನ್ ಪಿಕ್ಚರ್ ಗೆ 10 ಬಿಟ್ಟಿ ಟಿಕೆಟ್ ಕೊಡ್ತಾ ಇದಾರೆ.'
 
 'ಅಯ್ಯೋ ರಾಮ'!
 
 ಇತ್ತ ಹರಿಕಥೆಯಲ್ಲಿ ...ಮುಂದೆ ಅಚ್ಯುತದಾಸರು, ಕೃಷ್ಣನು ಅಕ್ಷಯಪಾತ್ರೆಯಲ್ಲಿ ಉಳಿದಿದ್ದ ಒಂದು ಅಗಳನ್ನು ತಿಂದು, ಯಾವಾಗಲೂ ಮೂಗಿನ ತುದಿಯಲ್ಲೇ ಕೋಪವಿರುವ ದೂರ್ವಾಸ ಮುನಿ ಮತ್ತು ಅವರ ಎಲ್ಲಾ ಶಿಷ್ಯವ್ರುಂದದ ಹಸಿವೆಯನ್ನು ಒಂದು ಕ್ಷಣದಲ್ಲಿ ಹೋಗಿಸಿದ್ದನ್ನು ವಿವರಿಸುತ್ತಿದ್ದರು. ಅತಿಥಿ ಸತ್ಕಾರ ಮಾಡಲಾಗದೆ ದ್ರೌಪದಿ ದೂರ್ವಾಸನ ಕೋಪಕ್ಕೆ ಒಳಗಾಗುವ ಸಂಭವ ಉಂಟಾಗುವ ಮೊದಲೇ ಕೃಷ್ಣ ಅವಳನ್ನು ಹೇಗೆ ಕಾಪಾಡಿದ ಅಂತ ಹಾಡಿ ಹೊಗಳಿದರು. ದುರ್ಯೋಧನನ ಕುತಂತ್ರವನ್ನು ಕೃಷ್ಣ ದೂರದೃಷ್ಟಿಯಿಂದ ಮುಂಚೆಯೇ ಅರಿತಿದ್ದ.
 
 ದಿನಸಿ ಅಂಗಡಿ ದಮಯಂತಿ ಸಣ್ಣದನಿಯಲ್ಲಿ ಶುರು ಮಾಡಿದರು. 'ಇದು ಕೇಳ್ತಿದ್ಹಂಗೆ ಜ್ಞಾಪಕ ಬಂತು....ಮೊನ್ನೆ ನೋಡಿ.. ರಾತ್ರಿ ಹತ್ತು ಗಂಟೆ ಸಮಯ. ಯಾರಿಗೋ ಹೋಗಬೇಕಾಗಿದ್ದ ಎಸೆಎಮ್‌ಎಸ್ ನಮ್ಮೆಜಮಾನ್ರ ಮೊಬೈಲ್ಗೆ ಬಂತು. ಅದರಲ್ಲಿ ,'ಸಿಎಂನಿಂದ ನಮಗೆ ಸರ್ಕುಲರ್ ಬಂದಿದೆ ಎಲ್ಲಾ ಸಕಾಲಕ್ಕೆ ಸರಿಯಾಗಿ ಮಾಡ್ಬೇಕೂಂತ.. ನಿಮ್ಮಿಂದ ಸೋನಾಮಸೂರಿಗೆ ಬೆರಸಬೇಕಾದ ಕಲ್ಲಿನಚೂರು ಈ ಸರ್ತಿ ಕಡಿಮೆ ಬಂದಿದೆ. ತುಪ್ಪಕ್ಕೆ ಬೆರಸಬೇಕಾದ ಹಂದಿ ಕೊಬ್ಬನ್ನೂ ಕಡಿಮೆ ಕಳಿಸಿದ್ದೀರಿ... ಸರ್ಫ್ ಗೆ ಮಿಕ್ಸ್ ಮಾಡ್ಬೇಕಾದ ವಿಭೂತಿ ಕೂಡ ಕಡಿಮೆ.. ಎಲ್ಲಾನು ಲೇಟಾಗೂ ಕಳಿಸಿದ್ದೀರಿ... ಹೀಗಾದ್ರೆ ಹೇಗೆ? ಬೇಗ ಸಕಾಲಕ್ಕೆ ಸರಿಯಾಗಿ ಕಳಿಸ್ಕೊಡಿ' ಅಂತ'.
 
 'ಹೀಗೂ ಉಂಟೆ, ಎಲ್ಲಾ ಮೋಸ!' ಗ್ರೂಪಿನ ಕಲೆಕ್ಟೀವ್ ಉದ್ಗಾರ.
 
 ಅಚ್ಯುತದಾಸರ ಹರಿಕಥೆ ಸಾಗಿತ್ತು. ಮುಂದೆ ಏಕಲವ್ಯ ತನ್ನ ಮನೋಗುರು ದ್ರೋಣಾಚಾರ್ಯರಿಗೆ ತನ್ನ ಬೆರಳನ್ನೇ ಗುರುದಕ್ಷಿಣೆಯಾಗಿ ಕೊಟ್ಟಿದ್ದನ್ನು ಕಣ್ಣಲ್ಲಿ ನೀರು ಬರುವಹಾಗೆ ಹೇಳಿದರು. ಧ್ಯೇಯ ಮತ್ತು ಕರ್ತವ್ಯ ನಿಷ್ಠೆಯಿಂದ ಶಿಷ್ಯ ಏನು ಕೂಡ ಸಾಧಿಸಬಲ್ಲ ಅಂತ ಏಕಲವ್ಯ ತೋರಿಸಿಕೊಟ್ಟ ಎಂದರು.
 ಯೂನಿವರ್ಸಿಟಿ ಯಮುನಾಬಾಯಿ ಪಿಸುಗುಟ್ಟಲು ಶುರು. ಅವರು ಕ್ಲರ್ಕ್ ಕೆಲಸ ಮಾಡಿ ಈಗೀಗ ರಿಟೈರಾಗಿದಾರೆ. 'ನನ್ಸೊಸೆ ಹರಿಣಿ ಹಾಲ್ಟಿಕೆಟ್ ಡಿಪಾರ್ಟಮೆಂಟ್ನಲ್ಲಿದ್ದಾಳೆ. ಮೊನ್ನೆ ಹೇಳ್ತಿದ್ದಳು... ಸಿಎಂ ಸರ್ಕುಲರ್ ಬಂತು. ಎಲ್ಲಾ ಸಕಾಲಕ್ಕೆ ಸರಿಯಾಗಿ ಮಾಡ್ದಿದ್ರೆ ಯೂಜಿಸಿ ಸ್ಕೇಲ್ ಕೊಡಲ್ಲಾ. ಪ್ರಮೋಷನ್ನೂ ಖೋತ ಅಂತ. ಅದಕ್ಕೇ ಈ ವರ್ಷ ಕ್ಲರ್ಕುಗಳೆಲ್ಲಾ ಸೇರಿ, ಪ್ಲಸ್ ಟೂ, ಸಿಇಟಿ, ಕ್ಯಾಟ್ ಕೊಶ್ಚನ್ ಪೇಪರ್ ಗಳು ಒಂದೆರೆಡು ದಿನ ಮುಂಚೆಯೇ ಸ್ಟೂಡೆಂಟ್ ಗಳಿಗೆ ಸಿಕ್ಕೋಹಾಗೆ ಕೆಫೆ ಡೇ, ಬರಿಷ್ಟಾ, ಕೆಎಸ್ಸಿಎ ಮತ್ತು ಪಬ್ ಗಳಲ್ಲಿ ಮಾರ್‍ತಾರಂತೆ. ಒಂದು ಪೇಪರ್‍ಗೆ ಐದು ಸಾವಿರ; ಫುಲ್ ಎಕ್ಜಾಮ್ ದು ಐವತ್ತು ಸಾವಿರ. ಸಕಾಲಕ್ಕೆ ಎಲ್ಲೆಡೆ ಸಿಗೋಹಾಗೆ ಮಾಡ್ಬೇಕೂಂತ ಪ್ಲ್ಯಾನ್.'
 
 'ಅಯ್ಯೋ ಶಿವನೆ!'
 
 'ಹೌದೂರಿ! ಗ್ರೇಸ್ ಮಾರ್ಕು ಸಿಸ್ಟಮ್ಮೂ ರೆಡಿ ಮಾಡೀದಾರಂತೆ ಈ ವರ್ಷ. ಐದು ಮಾರ್ಕು ಬೇಕೂಂದ್ರೆ ಐವತ್ತು ಸಾವಿರ, ಹತ್ತು ಮಾರ್ಕಿಗೆ ಒಂದು ಲಕ್ಷ; ಪೂರ್ತಿ ಪರೀಕ್ಷೆ ಪಾಸ್ಮಾಡ್ಬೇಕಂದ್ರೆ ಮೂವತ್ತು ನಲವತ್ತು ಸೈಟಂತೆ. ರೇಟೆಲ್ಲಾ ಟ್ಯಾಬ್ಯುಲೇಷನ್ ಮಾಡಾಗಿದಿಯಂತೆ.'
 
 ' ಹೀಗಾದ್ರೆ ದೇವ್ರೇ ಗತಿ!'
 
 ಅಷ್ಟು ಹೊತ್ತಿಗೆ ಅಚ್ಯುತದಾಸರು ಅಂದಿನ ಹರಿಕಥೆ ಮುಗಿಸಿ 'ಪವಮಾನ' ಹಾಡಿ ಮಂಗಳಾರತಿ ಮಾಡಿಸಲು ಸಿದ್ದರಾದರು. ತೀರ್ಥ ತರಲು ಸ್ವಲ್ಪ ಹೊತ್ತಾಯಿತು. 
 'ಗಂಗಾನದಿಯಿಂದ ಖುದ್ದಾಗಿ ತರಿಸಿದ್ದಾರೆ ಗಂಗಾಜಲ....ಸಕಾಲಕ್ಕೆ ಹರಿದ್ವಾರದಿಂದ ಬಂದಿಳಿದಿದೆ. ಇದನ್ನು ತರಿಸಿದವರು ಇನ್ನೂರು ಮೇಲ್ಪಟ್ಟು ಪಬ್ಲಿಕ್ ಸೆಕ್ಟರ್ ಆಫೀಸರುಗಳ ಹೆಸರು ದುರುಪಯೋಗ ಮಾಡಿ, ಅವರುಗಳ ಹೆಸರಿನಲ್ಲಿ ಎಎ ಬಿಎಂ ನಿಂದ ಎಳು ಕೋಟಿ ರೂಪಾಯಿ ಹೊಡೆದಿರುವುದಾಗಿ ಪೇಪರ್‍ನಲ್ಲಿ ಬಂದಿದೆ. ಸಿಬಿಐ ತನಿಖೆ ಶುರುಮಾಡಿದ್ದಾರೆ' ಅಂದ್ರು ರಿಟೈರ್ಡ್ ಪೋಲೀಸ್ ಇನ್ ಸ್ ಪೆಕ್ಟರ್ ಹೆಂಡ್ತಿ ಪ್ರಮೀಳ!
 
 ಅಚ್ಯುತದಾಸರ ಹರಿಕಥೆ ಇರ್‍ಲಿ,ತಲೆ ತುಂಬ ಆಗುತ್ತಿರೋ ಸ್ಕ್ಯಾಮ್ ಪುರಾಣಗಳನ್ನು ತುಂಬಿಕೊಂಡು ಪಟಾಲಂ ಮನೆಯಕಡೆ ಭಾರವಾದ ಹೆಜ್ಜೆ ಹಾಕಿದ್ರು. 
 
( *ಈ ಲೇಖನ 'ಅಪರಂಜಿ' ಏಪ್ರಿಲ್ 2012ರ ಸಂಚಿಕೆಯಲ್ಲಿ ಪ್ರಕಟವಾಗಿದೆ)

Read more at: http://kannada.oneindia.in/news/2012/04/05/karnataka-satire-on-sakala-harikatha-style-guarantee-of-services-aid0039.html